A NATURAL COFFEE PLANTER - KAOOSI RUSTUM SETHNA ಎಲ್ಲಿಯ ಪಾಕಿಸ್ತಾನದ ಕರಾಚಿ ಎಲ್ಲಿಯ ನಮ್ಮ ಮಲೆನಾಡಿನ ಯಲಗುಡಿಗೆ, ಎಲ್ಲೋ ಹುಟ್ಟಿ ಎಲ್ಲೋ ಮಿಂಚಿದ ಅಪರೂಪದ ಒಬ್ಬ ಪ್ರಾಮಾಣಿಕ ಪರಿಸರ ಪ್ರಿಯ ದಂತಕಥೆಯ ಪಯಣವೇ ಒಂದು ರೋಚಕ. 24ನೇ ಫೆಬ್ರವರಿ 1926 ರಂದು ಸ್ವಾತಂತ್ರ ಪೂರ್ವ ಅಖಂಡ ಭಾರತದ (ಇಂದಿನ ಪಾಕಿಸ್ತಾನ) ಕರಾಚಿಯ ಒಂದು ಪ್ರತಿಷ್ಠಿತ ಪಾರ್ಸಿ ಮನೆತನದಲ್ಲಿ ಜನಿಸಿದ "ಕೌಸಿ ರುಸ್ತುಂ ಸೇತ್ನಾ" ಓದಿನಲ್ಲಿ ಹೆಚ್ಚು ಆಸಕ್ತಿ ಇಲ್ಲದ ಕಾರಣ ತಮ್ಮ ನೆಚ್ಚಿನ ಹವ್ಯಾಸವಾಗಿದ್ದ ಕುದುರೆ ಸವಾರಿಯನ್ನು ವೃತ್ತಿಯಾಗಿಸಿ ಕೊಂಡು ಒಬ್ಬ ವೃತ್ತಿಪರ ಜಾಕಿಯಾಗುತ್ತಾನೆ. ಭಾರತದ ವಿಭಜನೆಯ ನಂತರ ಕೌಸಿ ಭಾರತದ ಪುಣೆಯಲ್ಲಿ ಬಂದು ನೆಲಸಿ ತಮ್ಮ ಜಾಕಿ ವೃತ್ತಿಯನ್ನು ಮುಂದೆವರಿಸುತ್ತಾನೆ. ಮುಂಬಯಿ ಡರ್ಬಿಯಲ್ಲಿ ತಮ್ಮ ಕೈಚಳಕ ತೋರಿಸುತ್ತ ಅದರ ಜೊತೆಗೆ ಫಾಲ್ಕನ್ ಪಕ್ಷಿಗಳ ಸಾಕಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಕಾಲಾಂತರದಲ್ಲಿ ಇವರಿಗೆ ಕರ್ನಾಟಕದ ಬಿಳಿಗಿರಿರಂಗನ ಬೆಟ್ಟದ ತಪ್ಪಲಿನಲ್ಲಿ ಇರುವ ಒಂದು ಕಾಫಿ ಪ್ಲಾಂಟೇಷನ್ ನಲ್ಲಿ ಎಸ್ಟೇಟ್ ಮ್ಯಾನೇಜರ್ ಆಗಿ ಕೆಲಸ ಮಾಡುವ ಸಹಯೋಗ ದೊರೆಯುತ್ತದೆ. ಬಿಳಿಗಿರಿರಂಗನ ಬೆಟ್ಟದಲ್ಲಿ ಕೌಸಿ ಸೋಲಿಗ ಬುಡಕಟ್ಟು ಜನಾಂಗದ ಒಬ್ಬ ಹಿರಿಯನ ಮುಖೇನ ಪರಿಸರ, ವನ್ಯಜೀವಿ, ಪಕ್ಷಿಗಳು, ಕಾಡು, ಮರ, ಬೆಟ್ಟದ ಬಗ್ಗೆ ಆಳವಾದ ಜ್ಞಾನ ಭಂಡಾರವನ್ನು ಪಡೆಯುತ್ತಾನೆ. 1960ರ ಆಸುಪಾಸಿನಲ್ಲಿ ಕೆಲವು ಮಿತ್ರರ ಮೂಲಕ ಪಶ್ಚಿಮ ಘಟ್ಟದ ಚಿಕ್ಕಮಗಳೂರಿನ ಮಿಡಲ್ಟನ್ (A Middleton) ಅವರ ಮಾಲಿಕತ್ವದ ಯಲಗುಡಿಗೆ ಕಾಫಿ ಎಸ್ಟೇಟ್ ನಲ್ಲಿ ಮ್ಯಾನೇಜರ್ ಹುದ್ದೆಯನ್ನು ಗಿಟ್ಟಿಸಿಕೊಳ್ಳುತ್ತಾನೆ. ಮಲೆನಾಡಿನ ಪಶ್ಚಿಮ ಘಟ್ಟ ಕೌಸಿ ಜೀವನದಲ್ಲಿ ಒಂದು ಹೊಸ ಅಧ್ಯಾಯ ಪ್ರಾರಂಭಿಸುತ್ತದೆ, ಅವನ ಜೀವನಕ್ಕೆ ಒಂದು ಹೊಸ ತಿರುವು ನೀಡುತ್ತದೆ. ಯಲಗುಡಿಗೆ ಕಾಫಿ ಎಸ್ಟೇಟಿನ ಇತಿಹಾಸ: ಹದಿನೇಳನೆಯ ಶತಮಾನದಲ್ಲಿ ಪಶ್ಚಿಮ ಘಟ್ಟದ ಮಲೆನಾಡಿನಲ್ಲಿ ಪ್ರಾರಂಭವಾದ ಕಾಫಿ ಬೆಳೆಯುವ ಪದ್ಧತಿ ಪ್ರಥಮ ಹಂತದಲ್ಲಿ ನಿರ್ದಿಷ್ಟ ಹಾಗೂ ಅಲ್ಪ ಪ್ರಮಾಣದಲ್ಲಿ ಬೆಳೆಯುತ್ತಿದ್ದರು. ಆದರೆ 1800ರ ಪೂರ್ವದಲ್ಲಿ ಬದಲಾದ ರಾಜಕೀಯ ಸನ್ನಿವೇಶ, ನಮ್ಮ ಮಲೆನಾಡಿನಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಂಡವು. ಬ್ರಿಟಿಷ್ ಸರ್ಕಾರ ಪಶ್ಚಿಮ ಘಟ್ಟದಲ್ಲಿ ಇರುವ ನೈಸರ್ಗಿಕ ಸಂಪತ್ತನ್ನು ಕೊಳ್ಳೆ ಹೊಡೆಯಲು, ಬ್ರಿಟನ್ ದೇಶದ ಹಲವಾರು ವ್ಯಾಪಾರ ಕಂಪನಿಗಳಿಗೆ ಗುತ್ತಿಗೆಯನ್ನು ನೀಡುತ್ತದೆ. ಕುಂಸಿ ಮೈನಿಂಗ್ (ಗಣಿಗಾರಿಕೆ), ಹೊನ್ನಾಳಿ ಚಿನ್ನದ ಗಣಿಗಾರಿಕೆ, ಟಿಂಬರ್ ಲಾಬಿ ಜೊತೆಗೆ ಕಾಫಿ ಪ್ಲಾಂಟೇಷನ್ ಯುರೋಪಿಯನ್ ಅವರ ಗಮನ ಸೆಳೆಯುತ್ತದೆ. 1831 ರಿಂದ 1881ರ ವರೆಗೆ ಚಾಲ್ತಿಯಲ್ಲಿದ್ದ ಕಮಿಷನರ್ ರೂಲ್ ಸಮಯದಲ್ಲಿ ಕರ್ನಾಟಕದ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಇರುವ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಮಡಿಕೇರಿಯಲ್ಲಿ ಹಲವಾರು ಯುರೋಪಿಯನ್ನರು ನಮ್ಮ ನೈಸರ್ಗಿಕ ಭರಿತ ಸಾವಿರಾರು ಹೆಕ್ಟೇರ್ ಕಾಡನ್ನು ಕಡಿದು ಕಾಫಿ ಬೆಳೆಯಲು ಪ್ರಾರಂಭಿಸುತ್ತಾರೆ. ಪ್ಯಾರಿ ಅ್ಯಂಡ ಕಂಪನಿಯ (Parry & Company) ಏಜೆಂಟ್ ಆಗಿದ್ದ ಎಚ್. ಜೊಲಿ (JH Jolly) ಚಿಕ್ಕಮಗಳೂರಿನಲ್ಲಿ ಬೆಳೆಯುವ ಕಾಫಿಯನ್ನು ಖರೀದಿಸಲು 1823ರಲ್ಲಿ ಮೈಸೂರು ಮಹಾರಾಜರ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕುತ್ತಾನೆ. ಇದರ ನಂತರ ಥೋಮಸ್ ಕ್ಯಾನಾನ್ (Thomas Cannon Mylemoney) 1830ರಲ್ಲಿ ಅಂದಿನ ಕಡೂರು ಜಿಲ್ಲೆಯಲ್ಲಿ (ಇಂದಿನ ಚಿಕ್ಕಮಗಳೂರು) ದೊಡ್ಡ ಪ್ರಮಾಣದಲ್ಲಿ ಕಾಫಿ ಬೆಳೆಯಲು ಶುರು ಮಾಡುತ್ತಾನೆ. ನೋಡು ನೋಡುತ್ತಲೆ, ಮಿಡಲ್ಟನ್ (A Middleton), ಫಾಸ್ಟರ್ (RD Foster), ಬ್ರೂಕ್ ಮೋಕೆಟ್ (Brooke Mocket), ವಿಲಿಯಮ್ಸ್ (RW Williams), ಚೆಸ್ಟರ್ (CK Chester), ರಾಡ್‌ಕ್ಲಿಫ್ (Radcliff), ಗಾಡ್ ಫ್ರೇ (CH Godfrey), ಈಲಿಯಟ್ (RH Elliott) ಮತ್ತು ಡೆಂಟನ್ (Denton) ಇವರುಗಳು ನಮ್ಮ ಪಶ್ಚಿಮ ಘಟ್ಟದ ಕಾಡನ್ನು ಕಡಿದು ಕಾಫಿ ಪ್ಲಾಂಟೇಷನ್ ವ್ಯವಸಾಯವನ್ನು ಪ್ರಾರಂಭಿಸುತ್ತಾರೆ. ಇವರಲ್ಲಿ ಗಾಡ್ ಫ್ರೇ (CH Godfrey) ಚಿಕ್ಕಮಗಳೂರಿನ ಪುಟ್ಟ ಹಳ್ಳಿಯಾದ "ಯಲಗುಡಿಗೆ" ಯಲ್ಲಿ ಇತರೆ ಯುರೋಪಿಯನ್ ಕಾಫಿ ಬೆಳೆಗಾರರ ತರಹವೇ ಪಶ್ಚಿಮ ಘಟ್ಟದ ದುರ್ಗಮವಾದ ಕಾಡಿನಲ್ಲಿ ಬೆಳೆದ ಬೃಹತ್ ಮರಗಳ ಮಾರಣಹೋಮ ನಡೆಸಿ ತಮ್ಮ ಕಾಫಿ ಪ್ಲಾಂಟೇಷನ್ ಅನ್ನು ಸ್ಥಾಪಿಸುತ್ತಾರೆ. 07/07/1954 ರಲ್ಲಿ ತಾನು ಸಾಯುವ ಮುಂಚೆ ಗಾಡ್ ಫ್ರೇ ತನ್ನ ಸ್ವ ಇಚ್ಚೆ ಉಯಿಲಿನ ಮೂಲಕ ತನ್ನ ಆಸ್ತಿಯನ್ನು ರುಮ್ಲೇ (Mr. Rumley Waiter Godfrey), ಹಿಲ್ಡಾ (Mrs. Hilda Philadelphia Godfrey) ಮತ್ತು ವೈಲೆಟ್ (Mrs. Violet Mabel Warneford) ಗೆ ಹಸ್ತಾಂತರಿಸುತ್ತಾನೆ. 1955ರಲ್ಲಿ ಈ ಮೂವರು ತಮ್ಮನ್ನು ಪ್ರತಿನಿಧಿಸುವ ಕಿಂಗ್ ಅಂಡ್ ಪಾರ್ಟ್ರಿಡ್ಜ್ (M/S King & Partridge) ಅನ್ನುವ ವಕೀಲರ ಸಂಸ್ಥೆಯ ಪ್ರತಿನಿಧಿ ಆಗಿದ ಲೆಸ್ಲಿ ಮಿಲ್ಲರ್ (Mr Leslie Davidson Miller) ಮುಖೇನ ಯಲಗುಡಿಗೆ ಕಾಫಿ ಎಸ್ಟೇಟ್ ಅನ್ನು ಮಿಡಲ್ಟನ್ (A Middleton) ಅವರಿಗೆ Rs. 95,000/- ಗಳಿಗೆ ಮಾರಾಟ ಮಾಡುತ್ತಾರೆ. ಸ್ವಾರಸ್ಯವಾದ ವಿಷಯ ಏನೆಂದರೆ ಗಾಡ್ ಫ್ರೇ ತನ್ನ ಜೀವಿತಾವಧಿಯಲ್ಲಿ ಮಿಡಲ್ಟನ್ ಇಂದ ಎಪ್ಪತ್ತೈದು ಸಾವಿರ ಸಾಲ ಪಡೆದ ಕಾರಣ, ಮಿಡಲ್ಟನ್ ಈ ಸಾಲವನ್ನು ವಜಾ ಮಾಡಿಕೊಂಡು ಕೇವಲ ಇಪ್ಪತ್ತು ಸಾವಿರಕ್ಕೆ ಚೆಕ್ ನೀಡುತ್ತಾನೆ. ಮಿಡಲ್ಟನ್ ಅಂದಿನ ಕಾಲದ ಪ್ರತಿಷ್ಟಿತ ಕಾಫಿ ಬೆಳೆಗಾರರಲ್ಲಿ ಒಬ್ಬರಾಗಿದ್ದು ಇವರನ್ನು ಅಂದಿನ ಮೈಸೂರಿನ ಮಹಾರಾಜರು ಮೈಸೂರಿನ ಪ್ರತಿನಿಧಿ ಸಭೆಗೆ ನಾಮನಿರ್ದೇಶನ ಸದಸ್ಯರನ್ನಾಗಿ ನೇಮಿಸುತ್ತಾರೆ. ವಯಸ್ಸಾದ ಮಿಡಲ್ಟನ್ ತನ್ನ ಬೃಹತ್ ಎಸ್ಟೇಟ್ ಅನ್ನು ನಿರ್ವಹಿಸಲು ಕೌಸಿಯನ್ನು ಎಸ್ಟೇಟ್ ಮ್ಯಾನೇಜರ್ ಆಗಿ ನೇಮಿಸುತ್ತಾನೆ, ಕೌಸಿ ಒಬ್ಬ ಶಿಸ್ತಿನ ವ್ಯಕ್ತಿತ್ವದ ಮನುಷ್ಯನಾಗಿದ್ದು ಆದಷ್ಟು ಬೇಗನೆ ಸ್ಥಳೀಯ ಪರಿಸರ, ಕಾಫಿ ವ್ಯವಸಾಯದ ಸಂಪೂರ್ಣ ಜ್ಞಾನ ಮತ್ತು ಭಾಷೆಯನ್ನು (ಕನ್ನಡ) ಕಲಿಯುತ್ತಾನೆ. 25/8/1968ರಲ್ಲಿ ಮಿಡಲ್ಟನ್ ತೀರಿಕೊಂಡ ನಂತರ ಅವರ ಮಡದಿ ವಿನಿಫ಼್ರೆಡ್ (Mrs. Winifred Middleton) ಕಾಫಿ ಎಸ್ಟೇಟ್ ಅನ್ನು ಮಾರಲು ಇಚ್ಛಿಸಿದಾಗ ಅವರು ತಮ್ಮ ಸಂಪೂರ್ಣ ಕಾಫಿ ಎಸ್ಟೇಟ್ ಅನ್ನು ತಮ್ಮ ನಿಷ್ಠಾವಂತ ಮ್ಯಾನೇಜರ್ ಕೌಸಿಗೆ 18/04/1973ರಂದು ಮಾರುತ್ತಾರೆ. 1985 ಇಂದ 1997ರ ಮಧ್ಯದಲ್ಲಿ ತಮ್ಮ ಕಾಫಿ ಎಸ್ಟೇಟಿನ ನೆರೆಯ ಜಾಗವನ್ನು ಜಾವರೆ ಗೌಡ, ರಾಮೇ ಗೌಡ, ಪುಟ್ಟೆ ಗೌಡ ಮತ್ತು ಚನ್ನಮ್ಮ (ರುದ್ರೇ ಗೌಡರ ಮಡದಿ) ಅವರಿಂದ ಕೊಳ್ಳುತ್ತಾರೆ. ಇದರೊಂದಿಗೆ ಕೌಸಿ 204ಎಕರೆ 5 ಗುಂಟೆಯ ಬೃಹತ್ ಗಾತ್ರದ ಕಾಫಿ ಎಸ್ಟೇಟಿನ ಒಡೆಯನಾಗುತ್ತಾನೆ. ಆದರೆ ತನ್ನ ವಯೋಸಹಜದ ದೃಷ್ಟಿಕೋನದಿಂದ ಬ್ರಹ್ಮಚಾರಿ ಹಾಗೂ ತನ್ನ ಮೂಲ ಕುಟುಂಬದಿಂದ ದೂರವಿದ್ದ ಕೌಸಿ 1/9/1998 ರಂದು ರಮೇಶ್ ರಾವ್ (U.M Ramesh Rao) ಮತ್ತು ದಿನಕರ್ ರಾವ್ (S. Dinakar Rao) ಜೊತೆಗೂಡಿ ಯಲಗುಡಿಗೆ ಎಸ್ಟೇಟ್ (M/S Yelagudige Estate) ಎಂಬ ಸಂಸ್ಥೆಯನ್ನು ಹುಟ್ಟು ಹಾಕುತ್ತಾರೆ. ಆದರೆ 30/11/1998ರಂದು ಕೌಸಿ ತಮ್ಮ ಪಾಲಿನ ಹಣವನ್ನು ಪಡೆದು ಈ ಯಲಗುಡಿಗೆ ಎಸ್ಟೇಟ್ ಸಂಸ್ಥೆಯಿಂದ ಹೊರ ಬರುತ್ತಾರೆ, ಆದರೆ ಕೌಸಿ ಹೊರಬರುವ ಮುಂಚೆಯೇ ಒಂದು ವಿನೂತನ ಮತ್ತು ಆಶ್ಚರ್ಯಕರ ಷರತ್ತನ್ನು ವಿಧಿಸುತ್ತಾನೆ. ಅದು ಏನೆಂದರೆ ಯಲಗುಡಿಗೆ ಕಾಫಿ ಎಸ್ಟೇಟಿನಲ್ಲಿ ಬೆಳೆದು ನಿಂತ ಕಾಡು ಜಾತಿಯ ಮರಗಳನ್ನು ಕಡಿಯುವ ಹಾಗಿಲ್ಲ, ಒತ್ತುವರಿ ಮಾಡುವ ಹಾಗಿಲ್ಲ ಮತ್ತು ತಮ್ಮ ಕಾಫಿ ಎಸ್ಟೇಟಿನಲ್ಲಿ ಇರುವ ಬ್ರಿಟಿಷ್ ಬಂಗಲೆಯಲ್ಲಿ ಅವರು ಜೀವಿಸುವ ವರೆಗೂ ಸ್ಥಳಾವಕಾಶ ಮಾಡಿಕೊಡಬೇಕು. ಈ ಒಪ್ಪಂದದ ನಂತರವೂ ಯಲಗುಡಿಗೆ ಕಾಫಿ ಎಸ್ಟೇಟ್ ಮತ್ತು ಅದರ ಸುತ್ತಲಿನ ಪರಿಸರದ ಜವಾಬ್ದಾರಿಯನ್ನು ಕೌಸಿಯೇ ನಿರ್ವಹಿಸುತ್ತಿದ್ದರು. ಪಶ್ಚಿಮ ಘಟ್ಟದ ಪರಿಸರ ಸಂರಕ್ಷಣೆ ಹೋರಾಟ:- ಕೌಸಿ ಚಿಕ್ಕಮಗಳೂರಿನ ಯಲಗುಡಿಗೆ ಎಸ್ಟೇಟಿಗೆ ಬಂದಾಗ ಸ್ವಾಭಾವಿಕವಾಗಿ ಕೆಲಸ ಬಿಟ್ಟು ಬೇರೆ ಯಾವುದೇ ರೀತಿಯ ಆಲೋಚನೆ ಹೊಂದಿರಲಿಲ್ಲ. ಆದರೆ ಕಾಲಕ್ರಮೇಣ ಪಶ್ಚಿಮ ಘಟ್ಟದ ಪರಿಸರ ಕೌಸಿಯ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ, ಅಲ್ಲಿನ ವನ್ಯಜೀವಿ, ಪಕ್ಷಿಗಳು, ಮರಗಳು, ನೀರಿನ ಮೂಲ, ಗುಡ್ಡ ಮತ್ತು ಕಾಡುಮೇಡುಗಳ ಸಂರಕ್ಷಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ. ಬೇರೆ ಕಾಫಿ ಬೆಳೆಗಾರರ ರೀತಿ ಶಿಕಾರಿ ಮಾಡುವ ಹವ್ಯಾಸ ಬೆಳೆಸಿಕೊಂಡಿದ್ದ ಕೌಸಿ, ಈ ಪರಿಸರದ ಸೂಕ್ಷ್ಮತೆಯನ್ನು ಅರಿತು ತಮ್ಮ ಕೋವಿಯನ್ನು 1970ರಲ್ಲಿ ತ್ಯಜಿಸುತ್ತಾರೆ. ಚಿಕ್ಕಮಗಳೂರಿನ ಪಶ್ಚಿಮ ಘಟ್ಟ ಅದರಲ್ಲೂ ವಿಶೇಷವಾಗಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಗಣಿಗಾರಿಕೆ ಇಂದ ಭದ್ರಾ ನದಿಯಲ್ಲಿ ಕಬ್ಬಿಣದ ಅದಿರು ಟೈಲಿಂಗ್ಸ್ ಶೇಖರಣೆ (Iron Ore Tailings) ಇಂದ ಮತ್ತು ಮರಳಿನಲ್ಲಿ ಕಂಡುಬಂದ ಮಲಿನದ ಬಗ್ಗೆ ಮೊಟ್ಟಮೊದಲ ಬಾರಿಗೆ ದ್ವನಿ ಎತ್ತಿದ್ದು ಮಾತ್ರ ಕೌಸಿ. ಕೌಸಿ ಇಲ್ಲಿಗೆ ಸುಮ್ಮನಾಗದೆ ಈ ಇಡೀ ಪ್ರಕರಣದ ಮೂಲಕ್ಕೆ ಸಂಬಂಧಿಸಿದಂತೆ ದಾಖಲೆಯನ್ನು ಸಾರ್ವಜನಿಕವಾಗಿ ಬಿಡುಗಡೆ ಗೊಳ್ಳಿಸುತ್ತಾರೆ. ಕೌಸಿಯ ಈ ಹೋರಾಟ ಹಲವಾರು ಶತ್ರುಗಳನ್ನು ಸೃಷ್ಟಿಸಿದರೆ ಇನ್ನೊಂದು ಕಡೆ ಹಲವಾರು ಜನರಿಗೆ, ಮಕ್ಕಳಿಗೆ ಪರಿಸರದ ಸಂರಕ್ಷಣೆ ಮತ್ತು ಅದರ ಜವಾಬ್ದಾರಿಯ ಅರಿವು ಮೂಡಿಸುವ ಗುರುಗಳಾಗುತ್ತಾರೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆಯುತ್ತಿರುವ ಗಣಿಗಾರಿಕೆ ಮತ್ತು ಒತ್ತುವರಿಯ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಹೂಡಿದ ದಾವೆಯಲ್ಲಿ ಕೌಸಿಯೇ ಮುಖ್ಯ ಅರ್ಜಿದಾರರಾಗಿ ಈ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಕೌಸಿಯ ಶ್ರಮದ ಪ್ರತಿಫಲವಾಗಿ ಭದ್ರಾ ಉಳಸಿ ಮತ್ತು ಜ್ಞಾನಪೀಠ ಪುರಸ್ಕೃತ ಅನಂತಮೂರ್ತಿಯವರ ಮಾರ್ಗದರ್ಶನದಲ್ಲಿ ಪ್ರಾರಂಭವಾದ "ತುಂಗಾ ಉಳಿಸಿ" ಹೋರಾಟ ಒಂದು ಚಳುವಳಿಯಾಗಿ ಮಾರ್ಪಡಾಗುತ್ತದೆ. ಕೌಸಿಗೆ ಪಶ್ಚಿಮ ಘಟ್ಟದ ಕಾಡುಗಳನ್ನು ನಾಶ ಮಾಡಿ ತಲೆ ಎತ್ತಿರುವ ಕಾಫಿ ತೋಟಗಳ ಬಗ್ಗೆ ಮಾಹಿತಿ ಇದ್ದ ಕಾರಣ ತಮ್ಮ ಸುತ್ತ ಮುತ್ತಲಿನ ಪರಿಸರದಲ್ಲಿ ಯಾರಿಗೂ ಒತ್ತುವರಿ ಮಾಡಲು ಬಿಡುತ್ತಿರಲ್ಲಿಲ್ಲ. ಕೌಸಿ ತಮ್ಮ ಪರಿಸರವನ್ನು ಎಷ್ಟು ಅರ್ಥಮಾಡಿಕೊಂಡಿದ್ದರು ಎಂದರೆ ಅವರ ಇಳಿವಯಸ್ಸಿನಲ್ಲೂ ಅವರು ಚಲಿಸುತ್ತಿದ್ದ ಲ್ಯಾಂಡ್ ರೋವರ್ (Land Rover) ಪಶ್ಚಿಮ ಘಟ್ಟದ ಏರು ಇಳಿತವನ್ನು ಮತ್ತು ಕಾಡು ದಾರಿಯನ್ನು ಸಲೀಸಾಗಿ ದಾಟುತ್ತಿತ್ತು. ಪರಿಸರ ಎಂಬ ಬಯಲು ಶಾಲೆಯಲ್ಲಿ ಪರಿಸರ ಶಿಕ್ಷಣ ಪಡೆದ ಕೌಸಿ ಭಾರತ ವನ್ಯಜೀವಿ ಮಂಡಲಿಯಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಾರೆ. ತಮ್ಮ ಕೊನೆಯ ಕಾಲದಲ್ಲಿ ಟಿಬೆಟ್ ಗುರು ದಲೈ ಲಾಮ (Dalai Lama) ಮತ್ತು ಅವರ ತಂಗಿ ಜೇಟಸನ್ ಪೇಮಾ (Jetson Pema) ಕೌಸಿಗೆ ಹತ್ತಿರ ವಾಗುತ್ತಾರೆ, ಇದರ ಪರಿಣಾಮವಾಗಿ ಅವರು ಪ್ರತಿ ವರ್ಷ ಕೆಲವು ದಿನಗಳನ್ನು ಧರ್ಮಶಾಲದಲ್ಲಿ ಕಾಲ ಕಳೆಯುತ್ತಿದ್ದರು. ಯಾವುದೇ ರೀತಿಯ ಪ್ರತಿಫಲ ಅಪೇಕ್ಷಿಸದೆ ಕರ್ನಾಟಕದ ಪಶ್ಚಿಮ ಘಟ್ಟದ ಪರಿಸರಕ್ಕಾಗಿ ಹಗಲು ರಾತ್ರಿ ದುಡಿದ ಈ ಪಾರ್ಸಿ ಸಂತ ಜನವರಿ 2014ರಲ್ಲಿ ತನ್ನ ಕೆಲಸ ಮುಗಿಸಿ 88ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು. ಸ್ವತಂತ್ರ ಭಾರತದ ಕರ್ನಾಟಕದ ಆದಿ ಪರಿಸರ ಹೋರಾಟಗಾರ ಶಿವರಾಮ ಕಾರಂತರು ಆದರೆ, ನಮ್ಮ ಪಶ್ಚಿಮ ಘಟ್ಟದ ಮೇಲೆ ಕೌಸಿ ಮತ್ತು ಪೂರ್ಣಚಂದ್ರ ತೇಜಸ್ವಿ ಪ್ರಶ್ನಾತೀತ ಮೊಟ್ಟಮೊದಲ ಪರಿಸರ ಹೋರಾಟಗಾರರು. ಇಂದು ಅದೆಷ್ಟೋ ಜನರು ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಗಣಿಗಾರಿಕೆ ನಿರ್ಬಂಧ ಹೇರುವ ಹೋರಾಟದಲ್ಲಿ ತಮ್ಮದೇ ಪ್ರಮುಖ ಪಾತ್ರ ಎಂದು ಬೊಬ್ಬೆ ಹೊಡೆದರು ನಾವುಗಳು ಈ ಹೋರಾಟದ ಕಾರಣಕರ್ತು ಕೌಸಿಯನ್ನು ಮರೆಯ ಬಾರದು. ಪಶ್ಚಿಮ ಘಟ್ಟದ ಪರಿಸರಕ್ಕಾಗಿ ಶ್ರಮಿಸಿದ ಶಿವರಾಮ ಕಾರಂತರು, ಕೌಸಿ ಮತ್ತು ಪೂರ್ಣಚಂದ್ರ ತೇಜಸ್ವಿಯವರ ಅನುಪಸ್ಥಿತಿಯಲ್ಲಿ ಇಂದು ನಮ್ಮ ಪರಿಸರಕ್ಕಾಗಿ ಹೋರಾಡುವ ಮನೋಭಾವನೆ ಇರುವ ಪರಿಸರ ಪ್ರಿಯರ ಸಂಖ್ಯೆ ನಶಿಸುತ್ತಿದ್ದು ಮುಂದಿನ ದಿನಗಳು ನಮ್ಮ ಮತ್ತು ನಮ್ಮ ಮುಂದಿನ ಪೀಳಿಗೆಯ ಪಾಲಿಗೆ ಯಮಕಂಟಕವಾಗಿ ಪರಿಣಮಿಸುತ್ತಿದೆ. ಇನ್ನೂರು ವರ್ಷಗಳಲ್ಲಿ ಪಶ್ಚಿಮ ಘಟ್ಟದ ಕಾಡನ್ನು ಕಡಿದು ಕಾಫಿ ಬೆಳೆಸಿ ವಿಜೃಂಭಿಸಿದ ಈ ಕಾಫಿ ಉದ್ಯಮ ಇಂದು ಸಂಕಷ್ಟದಲ್ಲಿ ಇದೆ. ಇಂದು ನಾವುಗಳು ನಮ್ಮ ಕಾಡು, ಮರ, ಗುಡ್ಡ ಮತ್ತು ಕಾಫಿಯನ್ನು ಸಹಾ ಕಳೆದುಕೊಂಡಿದ್ದು ಇದರ ಹೊಣೆಯನ್ನು ಯಾರು ಹೊರ ಬೇಕು? 2014ರಿಂದ ಕೌಸಿ ವಾಸಿಸುತ್ತಿದ್ದ ಬಂಗಲೆಗೆ ಬೀಗ ಜಡಿದ್ದಿದ್ದು ಇಂದು ಅವರ ಅಧೀನದಲ್ಲಿದ್ದ ಅಪಾರ ಹಣ ಮತ್ತು ಅವರ ಸಂಪತ್ತಿಗೆ ಯಾರು ವಾರಸುದಾರರು ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ. #ಪಶ್ಚಿಮ ಘಟ್ಟ ಉಳಿಸಿ# ~Ajay Kumar SharmaChartered Engineer, Valuator, Historian, Writer, Social and Environmental Activist.
1 Comment
|
Jeevan Maradi#Travel, #Homestays, #Resorts, #Village, #Coffee Archives
January 2024
Categories |