ಸ್ನೇಹಿತರೊಬ್ಬರು ಮಾತನಾಡುತ್ತಾ "ಹೋದ್ವರ್ಷ ಸಾವಿರದ ಮುನ್ನೂರು ಬಡ್ಡೆ ಸುಟ್ಟಿದಿನಿ ಮಾರ್ರೆ ಈವರ್ಷ ಬೇರೆ ಸಿಕ್ಕಾಪಟ್ಟೆ ಬಿಸ್ಲು ಇನ್ನೆಷ್ಟು ಬಡ್ಡೆ ಸುಡಕುಂಟಾ ಏನಾ... ಹಿಂಗೇ ಆದ್ರೆ ಇನ್ನೊಂದೆರಡ್ವರ್ಷದಲ್ಲಿ ಪೂರ್ತಿ ತ್ವಾಟ ಬೋಳಾಗ್ತದೆ ಆಮೇಲೆ ನಾವೂ ಎಲ್ಲಾರಾ ಕೂಲಿಗೆ ಹೋಗ್ಬೇಕೇನಾ... " ಅಂದರು. ಮುಖದಲ್ಲಿ ಸಣ್ಣಗೆ ಆತಂಕವಿತ್ತು. ಭರವಸೆ ಕಳೆದುಕೊಳ್ಳುತ್ತಿರುವ ಭವಿಷ್ಯದ ಬಗೆಗಿನ ಚಿಂತೆ ಮಾತಿನಲ್ಲಿ ಎದ್ದು ಕಾಣುತ್ತಿತ್ತು. ಅವರಿಗಿರುವುದು ಹತ್ತನ್ನೆರಡು ಎಕರೆ ಅರೇಬಿಕಾ ಕಾಫಿತೋಟ. ಆದರೆ ಬೋರರ್ ಹುಳುವಿನ ಕಾಟಕ್ಕೆ ಅರ್ಧಕ್ಕರ್ಧ ತೋಟವೇ ನಾಶವಾಗಿ ಹೋಗಿದೆ. ಈಗ ಉಳಿದಿರುವ ಗಿಡಗಳಿಗೆ ಬೋರರ್ ಬರದಂತೆ ತಡೆಯುವ ವ್ಯರ್ಥ ಹೋರಾಟದಲ್ಲಿ, ಉಳಿದಿರುವ ತೋಟದಲ್ಲಿ ಬದುಕು ಸಾಗಿಸುವ ಭಗೀರತ ಪ್ರಯತ್ನದಲ್ಲಿ ಅವರ ಆಯಸ್ಸು ಸವೆದುಹೋಗುತ್ತಿದೆ. ಅವರಷ್ಟೇ ಅಲ್ಲ, ಇವತ್ತು ಬಹುತೇಕ ಕಾಫಿ ಬೆಳೆಗಾರರ ಅದರಲ್ಲೂ ಅರೇಬಿಕಾ ಬೆಳೆಗಾರರ ಸ್ಥಿತಿಯಿದು. ಬದಲಾಗುತ್ತಿರುವ ಹವಾಮಾನ, ಸತ್ವ ಕಳೆದುಕೊಳ್ಳುತ್ತಿರುವ ಮಣ್ಣು, ರೋಗನಿರೋಧಕ ಶಕ್ತಿಯನ್ನೇ ಕಳೆದುಕೊಂಡಿರುವ ಗಿಡಗಳು, ಹಲವಾರು ವರ್ಷಗಳಿಂದ ಏರಿಕೆಯಾಗದ ಕಾಫಿ ಬೆಲೆ, ಗಗನಕ್ಕೇರಿ ನಿಂತಿರುವ ತೋಟದ ನಿರ್ವಹಣಾ ವೆಚ್ಚ, ಕಾರ್ಮಿಕರ ಕೂಲಿ. ಇವೆಲ್ಲವುಗಳಿಂದ ಹೈರಾಣಾಗಿ ಹೋಗಿರುವ ಬೆಳೆಗಾರ ಅಕ್ಷರಷಃ ಬೀದಿಗೆ ಬೀಳುವ ಹಂತಕ್ಕೆ ಬಂದು ನಿಂತಿದ್ದಾನೆ. ಹೊರಪ್ರಪಂಚ ಚಿಕ್ಕಮಗಳೂರಿನವರು, ಕೊಡಗಿನವರು ಎಂದರೆ ಕಣ್ಣರಳಿಸಿ ನೋಡುತ್ತದೆ, ಕಾಫಿ ಬೆಳೆಗಾರರೆಲ್ಲಾ ಶ್ರೀಮಂತರು ಎಂದು ಮಾತನಾಡಿಕೊಳ್ಳುತ್ತದೆ. ಆದರೆ ಕಾಫಿ ಬೆಳೆಯುವ ರೈತರ ಪರಿಸ್ಥಿತಿಯ ಅಸಲಿಯತ್ತೇ ಬೇರೆ. ಹಾಗೆ ನೋಡಿದರೆ ವರ್ಷಕ್ಕೆ ಮೂರು ನಾಲ್ಕು ಫಸಲು ಬೆಳೆಯುವ ಬಯಲುಸೀಮೆಯ ರೈತರು ವರ್ಷಕ್ಕೊಂದು ಬೆಳೆ ತೆಗೆಯುವ ಕಾಫಿ ಬೆಳೆಗಾರರಿಗಿಂದ ಎಷ್ಟೋ ವಾಸಿ. ಅವರಿಗೆ ವರ್ಷದಲ್ಲಿ ಒಂದು ಬೆಳೆ ಕೈಕೊಟ್ಟರೆ ಮತ್ತೊಂದರಲ್ಲಿ ನಷ್ಟ ಸರಿದೂಗಿಸಿಕೊಳ್ಳುವ ಅವಕಾಶವಿದೆ ಆದರೆ ಕಾಫಿ ಬೆಳೆಯುವ ರೈತನಿಗೆ ಲಾಭವೋ ನಷ್ಟವೋ ವರ್ಷಕ್ಕೊಂದೇ ಬೆಳೆ ಪಡೆಯುವ ಆಯ್ಕೆಯಷ್ಟೇ. ಇನ್ನು ಕಾಫಿ ಬೆಲೆಯ ವಿಚಾರಕ್ಕೆ ಬಂದರೆ ರೋಬಸ್ಟಾ ಕಾಫಿಗೆ 2004 ರಿಂದೀಚೆಗೆ ಬೆಲೆಯೇರಿಕೆಯೇ ಆಗಿಲ್ಲ.! ಒಂದುವರ್ಷ ಐದುನೂರು ರುಪಾಯಿ ಏರಿಕೆಯಾದರೆ ಮತ್ತೊಂದು ವರ್ಷ ಅಷ್ಟೇ ಬೆಲೆ ಕಡಿಮೆಯಾಗುತ್ತದೆ. ಬೇರ್ಯಾವ ಬೆಳೆ ಹದಿನೈದು ವರ್ಷಗಳಿಂದ ಒಂದೇ ಬೆಲೆಯಲ್ಲಿ ನಿಂತಿದೆ ಹೇಳಿ... ? ಈ ಬೆಲೆ ರೈತರ ಮೇಲೆ ಯಾವರೀತಿಯ ಪರಿಣಾಮ ಬೀರಿದೆ ಎಂದರೆ, ರೋಬಸ್ಟಾ ಬೆಲೆ ಯಾವತ್ತಿಗೂ ಮೂರೇಸಾವಿರ ಎಂದು ನಿರ್ಣಯಿಸಿಕೊಳ್ಳುವಷ್ಟು.! ಇನ್ನು ಅರೇಬಿಕಾದ ಬೆಲೆ ಎಲ್ಲೋ ಕೆಲವು ಬಾರಿ ಏರಿದ್ದು ಬಿಟ್ಟರೆ ಅದರದ್ದೂ ರೋಬಸ್ಟಾದ ಗತಿಯೇ.. ಇನ್ನು ಅರೇಬಿಕಾ ಕಾಫಿಯ ಇಳುವರಿಯೂ ಕಡಿಮೆ, ಬೆಲೆಯೂ ಕಡಿಮೆ ಇವೆರಡಕ್ಕೆ ಕಿಡಿ ಹೊತ್ತಿಸಿದಂತೆ ಬೋರರ್ ಕಾಯಿಲೆಯ ಗದಾಪ್ರಹಾರ. ಇವನ್ನೆಲ್ಲಾ ಸಹಿಸಿಕೊಂಡು ಬದುಕುತ್ತಿರುವ ರೈತನ ಕಥೆಯೇನಾಗಬೇಕು...! ಇವೆಲ್ಲಾ ಹೊಡೆತಗಳನ್ನು ತಿನ್ನುತ್ತಲೇ ಅಸ್ತಿತ್ವಕ್ಕಾಗಿ ಪ್ರತಿನಿತ್ಯವೂ ಹೊಡೆದಾಡುತ್ತಿರುವ ರೈತನ ಮೇಲೆ ಇನ್ನೊಂದು ಪೆಟ್ಟು ಪರೋಕ್ಷವಾಗಿ ದೊಡ್ಡಮಟ್ಟದಲ್ಲಿ ಬೀಳುತ್ತಿದ್ದರೂ ಬಹುತೇಕ ರೈತರಿಗೆ ಇದರ ಅರಿವಿಲ್ಲ. ಅದೇ ಚಿಕೋರಿ.! ಪಡಬಾರದ ಕಷ್ಟ ಪಟ್ಟು ಮಾರುಕಟ್ಟೆಗೆ ಬರುವ ಕಾಫಿಗೆ ಹೆಚ್ಚಿನ ಸ್ವಾದ ನೀಡುವ ನೆಪದಲ್ಲಿ ಚಿಕೋರಿಯೆಂಬ ಸ್ವಾದವೊಂದನ್ನು ಬೆರೆಸಲಾಗುತ್ತದೆ. ಚಿಕ್ಕಮಗಳೂರಿನ ಕಾಫಿಗೂ ಆಂಧ್ರ, ಉತ್ತರಪ್ರದೇಶದ ಚಿಕೋರಿಗೂ ಎಲ್ಲಿಂದೆಲ್ಲಿಯ ಸಂಬಂಧ...! ಧೂರ್ತ ವ್ಯಾಪಾರಿಗಳು ಸ್ವಾದದ ನೆಪವೊಡ್ಡುತ್ತಾರಾದರೂ ಚಿಕೋರಿಯ ಅಸಲಿತನವೇ ಬೇರೆ. ಕೆಜಿಗೆ ಎಪ್ಪತ್ತೆಂಬತ್ತು ರುಪಾಯಿಯ ಚಿಕೋರಿಯನ್ನು ಮುನ್ನೂರು ರುಪಾಯಿಯ ಕಾಫಿಗೆ ನಲವತ್ತು ಶೇಖಡಾ ಬೆರೆಸಿದರೆ ವ್ಯಾಪಾರಿಗೆ ಲಾಭವೆಷ್ಟಾಯಿತು...!? ಚಿಕೋರಿಯಿಂದಾಗಿ ಕಾಫಿಯ ಮಾರುಕಟ್ಟೆ ಅರ್ಧಕ್ಕರ್ಧ ಕುಸಿತವಾದರೆ ಬೆಲೆಯೇರಿಕೆ ಎಲ್ಲಿಂದಾಗಬೇಕು..? ವಿಪರ್ಯಾಸವೆಂದರೆ ಚಿಕೋರಿ ಕಾಫಿ ಮಾರುಕಟ್ಟೆಯನ್ನು ವ್ಯಾಪಿಸಿಕೊಂಡಿರುವ ಗಾತ್ರದ ಅರಿವು ಬಹುತೇಕ ಯಾವ ಬೆಳೆಗಾರನಿಗೂ ಇಲ್ಲ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ, ಕಾಫಿ ಬೆಳೆಗಾರ ದಿನದಿನಕ್ಕೂ ಕುಸಿದು ಹೋಗುತ್ತಿದ್ದರೂ ಕಾಫಿಯ ಉಳಿವಿಗೆ, ರೈತರ ಏಳಿಗೆಗೆ ಸ್ಪಷ್ಟ ದಾರಿಯೇ ತೋರುತ್ತಿಲ್ಲ. ದೊಡ್ಡಮಟ್ಟದ ವಿದೇಶಿ ವಿನಿಮಯ ತಂದು ಕೊಡುತ್ತಿರುವ ಕಾಫಿಯ ಸಮಸ್ಯೆಗೆ ಸರ್ಕಾರವೂ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ~ಕಾರ್ತಿಕಾದಿತ್ಯ ಬೆಳ್ಗೋಡು
0 Comments
Leave a Reply. |
Jeevan Maradi#Travel, #Homestays, #Resorts, #Village, #Coffee Archives
January 2024
Categories |